ಈ ಕೋವಿಡ್ ಸಮಸ್ಯೆ ಪ್ರಾರಂಭವಾದಾಗಿನಿಂದ ಮನೆಯೇ ಸರ್ವಸ್ವವಾಗಿ ಎಷ್ಟೋ ತಿಂಗಳುಗಳೇ ಕಳೆದಿವೆ. ಮನೆ ಮತ್ತು ಕಚೇರಿಯ ನಡುವೆಯಿದ್ದ ಅಂತರವೇ ಮಾಯವಾಗಿದೆ. ಹೊರಗೆ ಸುತ್ತುವುದಕ್ಕಾಗೊಲ್ಲ, ಒಳಗೆಯೇ ಬಂಧಿಯಾಗಿರುವುದಕ್ಕೂ ಆಗುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಮನಸ್ಸಿಗೆ ಕೊಂಚ ಮುದ ಕೊಡುವಂತಹ ಸಾಧನವೆಂದರೆ ಮರೆಯಲಾರದ, ಸೊಗಸಾದ ಹಳೆ ನೆನಪುಗಳು. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಹಳೆ ಮಾತಿದೆ. ಈ ವಿಚಿತ್ರ ಸನ್ನಿವೇಶದಲ್ಲಿ ದೇಶ ಸುತ್ತುವುದಂತೂ ಆಗದೆ ಇರುವಂತದ್ದು. ಇನ್ನು ಎಷ್ಟು ಅಂತ ಪುಸ್ತಕಗಳನ್ನೇ ಓದುತ್ತಿರುವುದು? ಎರಡರ ಸಮತೋಲನವಿದ್ದಾಗ ಮಾತ್ರ ಬದುಕಿಗೂ ಒಂದು ಅರ್ಥ, ಒಂದು ತೂಕ. ಕೆಲವು ದಿವಸಗಳು ಜಿಗುಪ್ಸೆ ತರಿಸಿದಾಗ ಹಳೆ ನೆನಪುಗಳು ಮತ್ತು ಸಂಚಾರಗಳ ಆ ಬೃಹತ್ ಪೆಟ್ಟಿಗೆಯೇ ಜೀವನಕ್ಕೆ ಕೈ ಹಿಡಿದಿವೆ. ಹೀಗೆ ಯೋಚಿಸುತ್ತಿದ್ದಾಗ ಸ್ಮೃತಿ ಪಟಲದಲ್ಲಿ ಈಗಲೂ ಹಚ್ಚ ಹಸಿರಾಗಿ ಉಳಿದಿರುವಂತಹ ಕೆಲವು ಘಟನೆಗಳು ವ್ಯಾಪಿಸತೊಡಗಿದವು. ಮಳೆಗಾಲ, ಮೈ ತುಂಬಿ ಹರಿದ ಜಲಪಾತ, ಕಾನನ, ಬೆಟ್ಟ, ಸಸ್ಯರಾಶಿ, ತಣ್ಣನೆ ಬೀಸುತ್ತಿದ್ದ ಗಾಳಿ.. ಸರಿಯಾಗಿ ಒಂದು ವರ್ಷವಾದರೂ ಕೂಡ ಪ್ರತಿಯೊಂದು ನಿಮಿಷವೂ ನೆನ್ನೆ ಮೊನ್ನೆ ನಡೆದಂತೆ ಇದೆ. ಓದಿದ ನಿಮಗೂ ನನ್ನ ಜೊತೆಯೇ ಹೋದಂತೆ ಅನುಭವವಾಗಬೇಕು ಎನ್ನುವುದೇ ನನ್ನ ಆಶಯ. ಈ ಜಲಪಾತಗಳನ್ನ ನೋಡಿ ಕಣ್ಣು ತುಂಬಿಕೊಳ್ಳುವುದೇ ಒಂದು ವರ್ಣಿಸಲಸಾಧ್ಯವಾದ ಭ...