ಈ ಕೋವಿಡ್ ಸಮಸ್ಯೆ ಪ್ರಾರಂಭವಾದಾಗಿನಿಂದ ಮನೆಯೇ ಸರ್ವಸ್ವವಾಗಿ ಎಷ್ಟೋ ತಿಂಗಳುಗಳೇ ಕಳೆದಿವೆ. ಮನೆ ಮತ್ತು ಕಚೇರಿಯ ನಡುವೆಯಿದ್ದ ಅಂತರವೇ ಮಾಯವಾಗಿದೆ. ಹೊರಗೆ ಸುತ್ತುವುದಕ್ಕಾಗೊಲ್ಲ, ಒಳಗೆಯೇ ಬಂಧಿಯಾಗಿರುವುದಕ್ಕೂ ಆಗುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಮನಸ್ಸಿಗೆ ಕೊಂಚ ಮುದ ಕೊಡುವಂತಹ ಸಾಧನವೆಂದರೆ ಮರೆಯಲಾರದ, ಸೊಗಸಾದ ಹಳೆ ನೆನಪುಗಳು.
ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಹಳೆ ಮಾತಿದೆ. ಈ ವಿಚಿತ್ರ ಸನ್ನಿವೇಶದಲ್ಲಿ ದೇಶ ಸುತ್ತುವುದಂತೂ ಆಗದೆ ಇರುವಂತದ್ದು. ಇನ್ನು ಎಷ್ಟು ಅಂತ ಪುಸ್ತಕಗಳನ್ನೇ ಓದುತ್ತಿರುವುದು? ಎರಡರ ಸಮತೋಲನವಿದ್ದಾಗ ಮಾತ್ರ ಬದುಕಿಗೂ ಒಂದು ಅರ್ಥ, ಒಂದು ತೂಕ. ಕೆಲವು ದಿವಸಗಳು ಜಿಗುಪ್ಸೆ ತರಿಸಿದಾಗ ಹಳೆ ನೆನಪುಗಳು ಮತ್ತು ಸಂಚಾರಗಳ ಆ ಬೃಹತ್ ಪೆಟ್ಟಿಗೆಯೇ ಜೀವನಕ್ಕೆ ಕೈ ಹಿಡಿದಿವೆ. ಹೀಗೆ ಯೋಚಿಸುತ್ತಿದ್ದಾಗ ಸ್ಮೃತಿ ಪಟಲದಲ್ಲಿ ಈಗಲೂ ಹಚ್ಚ ಹಸಿರಾಗಿ ಉಳಿದಿರುವಂತಹ ಕೆಲವು ಘಟನೆಗಳು ವ್ಯಾಪಿಸತೊಡಗಿದವು. ಮಳೆಗಾಲ, ಮೈ ತುಂಬಿ ಹರಿದ ಜಲಪಾತ, ಕಾನನ, ಬೆಟ್ಟ, ಸಸ್ಯರಾಶಿ, ತಣ್ಣನೆ ಬೀಸುತ್ತಿದ್ದ ಗಾಳಿ.. ಸರಿಯಾಗಿ ಒಂದು ವರ್ಷವಾದರೂ ಕೂಡ ಪ್ರತಿಯೊಂದು ನಿಮಿಷವೂ ನೆನ್ನೆ ಮೊನ್ನೆ ನಡೆದಂತೆ ಇದೆ. ಓದಿದ ನಿಮಗೂ ನನ್ನ ಜೊತೆಯೇ ಹೋದಂತೆ ಅನುಭವವಾಗಬೇಕು ಎನ್ನುವುದೇ ನನ್ನ ಆಶಯ.
ಈ ಜಲಪಾತಗಳನ್ನ ನೋಡಿ ಕಣ್ಣು ತುಂಬಿಕೊಳ್ಳುವುದೇ ಒಂದು ವರ್ಣಿಸಲಸಾಧ್ಯವಾದ ಭಾವನೆ. ಪ್ರಕೃತಿಯ ಮಡಿಲಲ್ಲಿ ನೀರು ಎತ್ತರದಿಂದ ರಭಸವಾಗಿ ಕೆಳಗೆ ಧುಮ್ಮಿಕ್ಕುವುದೇ ಒಂದು ಅನುಭೂತಿ. ಅದುವೇ ಮಳೆಗಾಲದಲ್ಲಿ ಈ ಜಲಪಾತಗಳು ಮೈದುಂಬಿ ಹರಿಯುವ ದೃಶ್ಯವೇ ಒಂದು ಅಮೋಘ ಸಂಚಲನ ಮೂಡಿಸುವಂತದ್ದು . ನಾನು ನನ್ನ ಆತ್ಮೀಯ ಗೆಳೆಯ ಮಂಜುನಾಥ್ ಇಬ್ಬರೂ, ಹೋಗುತ್ತಿರುವ ಜಲಪಾತದ ಬಗ್ಗೆ ಅಷ್ಟೇನೂ ನಿರೀಕ್ಷೆ ಇರದೇ, ಒಂದರ್ಧ ಘಂಟೆ ಹೋಗಿ ನೋಡೋಣವೆಂದೇ ಪ್ರಯಾಣ ಪ್ರಾರಂಭಿಸಿದ್ದೆವು. ಅಂತರ್ಜಾಲದಲ್ಲೂ ಈ ಜಲಪಾತದ ಬಗ್ಗೆ ಬಹಳ ವಿಮರ್ಶೆಗಳಾಗಲಿ, ಬರಹಗಳಾಗಲಿ ಇರಲಿಲ್ಲ. ಒಂದು ಹೆಜ್ಜೆ ಹಾಕಿ ನಾವೇ ನೋಡೇಬಿಡೋಣವೆಂಬ ಹುಮ್ಮಸ್ಸಿನಲ್ಲಿ ಹೊರಟಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಸುಮಾರು ೩೫ ಕಿ.ಮೀ ದೂರವಿರುವ ಯೆಲ್ಲಾಪುರ ತಾಲೂಕಿನ ಉಂಚಳ್ಳಿ ಜಲಪಾತ ಸಹ್ಯಾದ್ರಿ ಪರ್ವತ ಶ್ರೇಣಿಯ, ಕಡಿಮೆ ಪ್ರಖ್ಯಾತಿ ಹೊಂದಿರುವ ಒಂದು ಆಭರಣ, ಉತ್ಖನನವಾಗದ ನಿಧಿ ಎಂದರೆ ಅತಿಶಯೋಕ್ತಿಯೇನಲ್ಲ. ಜಲಪಾತ ವೀಕ್ಷಣಾ ಸ್ಥಳ ತಲುಪಲು ಪ್ರವೇಶ ದ್ವಾರದಿಂದ ಸುಮಾರು ಒಂದು ಕಿ.ಮೀ ಕ್ರಮಿಸಬೇಕು. ಪ್ರವಾಸಿಗರ ಅನುವಿಗಾಗಿ ಮೆಟ್ಟಿಲುಗಳ ಸೌಲಭ್ಯವೂ ಸಹ ಮಾಡಲಾಗಿದೆ.
ಸುತ್ತಲೂ ದಟ್ಟ ಅರಣ್ಯ. ಒಂದೊಂದು ಮೆಟ್ಟುಲು ಇಳಿಯುತ್ತಿದ್ದ ಹಾಗೆ ದೂರದಲ್ಲೆಲ್ಲೋ ನೀರು ಹರಿಯುತ್ತಿರುವ ಸಣ್ಣ ದನಿ ಕೇಳಿದಂತೆ ಭಾಸವಾಗುತ್ತದೆ. ಕೆಳಗಿಳಿಯುತ್ತ ಹೋದ ಹಾಗೆ, ಆಗ ಈಗ ಕೇಳಿಬರುತ್ತಿದ್ದ ಆ ಮೆಲು ದನಿ, ನಿರಂತರವಾಗಿ ವ್ಯಾಪಿಸುತ್ತ, ಸ್ವಲ್ಪ ಜೋರಾಗಿಯೇ ನಮ್ಮ ಕರ್ಣಗಳಿಗೆ ರಾಚಲು ಪ್ರಾರಂಭವಾಯಿತು. ಮುಖ್ಯ ಪ್ರವೇಶ ದ್ವಾರದ ಬಳಿ, ನಮ್ಮ ಚಾರಣ ಆರಂಭ ಮಾಡುವಾಗ ಬಿಸಿಲಿನ ತಾಪ ನೆತ್ತಿಯ ಮೇಲೆ ಇದ್ದರೆ, ಕೆಳಗಿಳಿದ ಹಾಗೆ ಮೋಡ ಮುಸುಕಿದ ವಾತಾವರಣವಾಗುತ್ತ ಸಾಗಿತ್ತು.
ಸುಮಾರು ಇಪ್ಪತ್ತು ಇಪ್ಪತ್ತೈದು ನಿಮಿಷಗಳು ನಿರಂತರವಾಗಿ ಇಳಿದ ಮೇಲೆ , ಪಕ್ಕದಲ್ಲೇ ನೀರಿನ ರಭಸ, ಭೋರ್ಗರೆತ, ಸದ್ದು ಎಲ್ಲವು ಅಧಿಕವಾದಂತಹ ಅನುಭವ. ಅಕ್ಕ ಪಕ್ಕ ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಮರಗಳು. ಮುಂದೆ ಇರುವ ಮೆಟ್ಟಿಲಿನ ದಾರಿ ಬಿಟ್ಟರೆ ಬೇರೇನೂ ಕಾಣಿಸುತ್ತಿಲ್ಲ. ಇನ್ನೊಂದಿಷ್ಟು ಮೆಟ್ಟಿಲುಗಳು ಇಳಿದ ಬಳಿಕ ಕಣ್ಣನ್ನು ಸ್ವಲ್ಪ ದೂರ ಹಾಯಿಸಿದರೆ ಒಂದು ವೀಕ್ಷಣಾ ಗೋಪುರ ಕಾಣಿಸುತ್ತಿತ್ತು. ಅಲ್ಲಿಂದೇನೋ ಕಾಣಬಹುದೇನೋ ಎಂಬ ಕುತೂಹಲದಿಂದ ವೇಗವಾಗಿ ನಡೆದೆವು. ಆ ಸ್ಥಳ ತಲುಪಿ ನೋಡಿದರೆ, ಎದೆ ಬಡಿತ ಸ್ತಬ್ಧವಾಗಿ, ಹೃದಯದಿಂದ ಉದ್ಗಾರ ಬರುವಂತಹ ದೃಶ್ಯ. ಸುಮಾರು ೪೦೦ ಅಡಿಗಳ ಎತ್ತರದಿಂದ ನೀರು ಲೀಲಾಜಾಲವಾಗಿ, ಅಡೆತಡೆಗಳಿಲ್ಲದೆ ಕೆಳಗೆ ಬೀಳುತ್ತಿದೆ! ಅಲ್ಲಿಂದ ಕೆಳಗೆ ನೋಡಿದಾಗ ಇನ್ನೊಂದು ವೀಕ್ಷಣಾ ಸ್ಥಳ ಇರುವುದು ಖಚಿತವಾಗುತ್ತಿದಂತೆ ಜಿಂಕೆಯಂತೆ ಜಿಗಿದು ಉತ್ಸಾಹದಿಂದ ಹೆಜ್ಜೆ ಹಾಕಿದೆವು. ನಮಗಿನ್ನೂ ಸಂಪೂರ್ಣ ಚಿತ್ರಣ ಸಿಕ್ಕಿರಲಿಲ್ಲ!
ಇನ್ನ ಕೆಳಗೆ ಇಳಿಯುತ್ತಿದ್ದಂತೆ ಮೆಟ್ಟಿಲೆಲ್ಲ ಕೆಸರು ಮಯ. ನಾಜೂಕಾಗಿ ಹೆಜ್ಜೆಗಳನ್ನು ಇಡುತ್ತ ಕೆಳಗಿನ ವೀಕ್ಷಣಾ ಗೋಪುರ ತಲುಪಿದೆವು. ಆ ಸ್ಥಳದಲ್ಲಿ ನಿಂತು ಜಲಪಾತ ವೀಕ್ಷಿಸಿದಾಗ, ಮನಸಿನಲ್ಲಿ ಕೋಲಾಹಲವೇ ಎದ್ದಿತು. ಅತಿರೇಖವೇನೋ ಅನಿಸುವಷ್ಟು ಉಲ್ಲಾಸ. ಮೈನವಿರೇಳಿಸುವುದು ಎನ್ನುವ ಪದಕ್ಕೆ ಆ ದಿನ, ಆ ಕ್ಷಣ ನಿಜವಾದ ಅರ್ಥ ಸಿಕ್ಕಿತು. ಅದೆಂತಹ ಅದ್ಭುತ, ಅದೆಂತಹ ಮನೋಹರ ದೃಶ್ಯವೆಂದರೆ ಯಾವುದೇ ಚಿತ್ರ, ಯಾವುದೇ ಕವಿತೆ, ಆ ರಮ್ಯ ನೋಟಕ್ಕೆ ನ್ಯಾಯ ಒದಗಿಸುತ್ತಿರಲಿಲ್ಲ . ಎತ್ತರದ ಬೆಟ್ಟದ ತುದಿಯಿಂದ, ಸಣ್ಣದಾಗೆ ಕಾಣುತ್ತಿದ್ದ ಅಘನಾಶಿನಿ ನದಿ, ಬರಬರುತ್ತ ಗಾತ್ರ ಹೆಚ್ಚಿಸಿಕೊಂಡು, ಸುಮಾರು ೪೦೦ ಅಡಿ ಧುಮ್ಮಿಕ್ಕುತ್ತಿದ್ದಳು. ಈ ತ್ರಿಕೋನಾಕಾರದ ಜಲರಾಶಿಯ ರಚನೆಯೇ ಇಲ್ಲಿನ ಒಂದು ವಿಶಿಷ್ಟತೆ.
ಅಲ್ಲಿ ಹೋಗಿ ಆ ನಯನಮನೋಹರ ದೃಶ್ಯಾವಳಿಯನ್ನು ಸವೆಯುವಷ್ಟರಲ್ಲಿ, ಜಿಟಿಜಿಟಿಯೆಂದು ಮಳೆಯೂ ಶುರುವಾಗಿ, ಆ ಮಳೆಯ ಹನಿಗಳೊಡನೆ, ದಟ್ಟವಾಗಿ ಮಂಜು ಸಹ ಆವರಿಸಿಕೊಂಡು, ರುದ್ರನರ್ತನವಾಡುತ್ತಿದ್ದ ಅಘನಾಶಿನಿಯನ್ನು ಮರೆಮಾಚುತ್ತಿತ್ತು. ಸುತ್ತಲೂ ನಿತ್ಯ ಹರಿದ್ವರ್ಣದಂತೆ, ಹಸಿರಿನ ಲೇಪನವಿದ್ದ ದಟ್ಟ ಅರಣ್ಯ, ಬೆಟ್ಟಗುಡ್ಡಗಳು, ಸಾವಿರಾರು ಲೀಟರ್ ಗಟ್ಟಲೆ ಶುದ್ಧ ಹಾಲಿನಂತೆ ಘೋರ ಘರ್ಜನೆ ಮಾಡುತ್ತ, ಬಂಡೆಗಲ್ಲುಗಳು , ಗಿಡಮೂಲಿಕೆಗಳ ಮಧ್ಯೆ ಬಳುಕುತ್ತ ಸುರಿಯುತ್ತಿದ್ದ ಅಘನಾಶಿನಿ ಜಲದೇವಿ ಕೆಳಗೆ ಹೊಂಡಕ್ಕೆ ಚಿಮ್ಮಿ, ಮತ್ತೆ ಮುನ್ನೂರು ಅಡಿ ಮೇಲಕ್ಕೆ ಸಾಮೂಹಿಕವಾಗಿ ಪುಟಿಯುತ್ತಿದ್ದ ಕೆಲವು ನೀರಿನ ಹನಿಗಳು, ಮಬ್ಬಿನ ಆಟದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಜಲಪಾತ, ಎಲ್ಲವೂ ಲಯಬದ್ಧವಾಗಿ ಪ್ರಕೃತಿಯ ಸ್ವರಮೇಳದಂತೆ ಕಂಗೊಳಿಸುತ್ತಿದ್ದವು.
ಯಾವ ಕ್ಯಾಮೆರಾ ಕೂಡ ಆ ಸೊಬಗನ್ನು ಸೆರೆ ಹಿಡಿಯಲು ಆಗುವುದು ಸಂಶಯ. ನಾವು ಅಲ್ಲಿ ತಲುಪಿದಾಗ ಒಂದಿಬ್ಬರು ಹುಡುಗರು ಅಷ್ಟೇ ಇದ್ದರು. ಸ್ವಲ್ಪ ಸಮಯವಾಗುತ್ತಿದಂತೆ ಬಹಳಷ್ಟು ಮಂದಿ ಬಂದರು, ಕಿರುಚಾಡಿದರು, ಫೋಟೋ ಹೊಡೆದುಕೊಂಡರು, ಹರಟೆ ಹೊಡೆದರು, ಹೋದರು. ಆದರೆ ಅಲ್ಲಿ ಆವರಿಸಿದ್ದ ಆ ಅರಣ್ಯದ ಮೌನ , ಆ ನೀರಿನ ಸದ್ದು ಅನುಭವಿಸದೇ ಹೊರಟರೆ ಆ ಜಾಗದ ವಿಶಿಷ್ಟತೆಯೇ ಸವೆದಂತಾಗೋದಿಲ್ಲ. ಒಂದೊಂದು ನಿಮಿಷ ಆ ದೃಶ್ಯವನ್ನು ಹೃದಯದ ಅಂತರಾಳದಲ್ಲಿ ಅಂತರ್ಗತ ಮಾಡುವಷ್ಟರಲ್ಲಿ ಆ ನಿಗೂಢತೆ ಮತ್ತೂ ಪ್ರತಿಧ್ವನಿಸುತ್ತಿತ್ತು.
ಆ ಸೌಂದರ್ಯವನ್ನು ಸೆರೆ ಹಿಡಿಯುವ ಸಲುವಾಗಿ ಕ್ಯಾಮೆರಾ ಹೊರಗೆ ತೆಗೆದರೆ ಬಿರುಸಾದ ಗಾಳಿ, ಮಳೆಯ ತೀವ್ರತೆಯೂ ಹೆಚ್ಚಾಗುತ್ತಿದೆ. ಕ್ಯಾಮೆರಾ ಮೇಲೆ ಕೊಡೆ ಹಿಡಿದು ಫೋಟೋ ಹೊಡೆಯುವ ಸಾಹಸಕ್ಕೆ ಮುಂದಾದರೆ, ಕೊಡೆಯನ್ನೇ ಎಳೆದು ಹಾಕುವಂತಹ ಗಾಳಿ. ಕೊನೆಗೂ ನಾವು ಪಡುತ್ತಿದ್ದ ಶ್ರಮಕ್ಕೆ ಕನಿಕರ ತೋರಿಸಿ ಆ ಪ್ರಕೃತಿ ಒಲಿದಳು! ಎಷ್ಟೋ ಚಿತ್ರಗಳು ತೆಗೆದರೂ, ನಂತರ ನೋಡಿದಾಗ , ನಮ್ಮ ಕಣ್ಣಾರೆ ನೋಡಿದ ಆ ದೃಶ್ಯಕಾವ್ಯಕ್ಕೂ , ಕ್ಯಾಮೆರಾ ಕಣ್ಣು ನೋಡಿದ್ದಕ್ಕೂ ತಾಳ ಮೇಳ ಇಲ್ಲವೇನೋ ಎನಿಸಿತು!
ಈ ರಮಣೀಯ ಉಂಚಳ್ಳಿ ಜಲಪಾತವನ್ನು, ಲುಷಿಂಗ್ಟನ್ ಎಂಬ ಆಂಗ್ಲ ಜಿಲ್ಲಾಧಿಕಾರಿ ೧೮೪೫ ರಲ್ಲಿ ಕಂಡುಹಿಡಿದನೆಂದು ಹೇಳಲಾಗುತ್ತದೆ. ಜಲಪಾತದ ಭೋರ್ಗರೆವ ಸದ್ದು ಎಷ್ಟಿರುತ್ತದೆಂದರೆ ಈ ಸದ್ದು ಕೇಳುಗರನ್ನ ಕೆಪ್ಪಾಗಿಸುತ್ತದೆ ಎಂದು ಈ ಜಲಪಾತಕ್ಕೆ ಕೆಪ್ಪ ಜೋಗ ಎಂದೂ ಕರೆಯುವುದುಂಟು. ಇದರ ಸೌಂದರ್ಯ ಮಳೆಗಾಲದಲ್ಲಿ ಜಗತ್ಪ್ರಸಿದ್ಧ ಜೋಗ ಜಲಪಾತವನ್ನೂ ಮೀರಿಸುವಂತದ್ದು, ಆದರೆ ಅಷ್ಟೊಂದು ಪ್ರಚಾರ ಇಲ್ಲದ ಕಾರಣ ಬಹಳ ಜನರಿಗೆ ಇದರ ಇರುವಿಕಿಯೇ ತಿಳಿದಿಲ್ಲ.
ನೋಡನೋಡುತ್ತಿದ್ದಂತೆ ಸುಮಾರು ಒಂದೂವರೆ ತಾಸು ಅಲ್ಲೇ ಕಳೆದುಹೋಗಿತ್ತು. ಈ ಅತಿಮನೋಹರ ಜಲಪಾತದೆದುರು ನಿಂತಾಗ ಸಮಯವೇ ಆ ಸೊಗಸನ್ನು ಸವೆಯುತ್ತಾ ನಿಂತಿದೆಯೇನೋ ಎಂದೆನಿಸುತ್ತದೆ. ಮರ್ಕಟ ಮನಸ್ಸಿನ ಒಳಗೆ ಯಾವುದೇ ವಿಚಾರ ಹಾದುಹೋಗುವುದಿಲ್ಲ, ಇಡೀ ದೇಹದಲ್ಲಿ ನೆಮ್ಮದಿಯ ಸಂಚಲನ ಮೂಡುತ್ತದೆ. ಹಸಿವು, ನೋವು, ಚಿಂತೆ, ದುಃಖ ಎಲ್ಲವನ್ನೂ ಅಘನಾಶಿನಿ ನಾಶ ಮಾಡಿರುತ್ತಾಳೆ. ಆ ನಿಷ್ಕಳಂಕ ಪ್ರಕೃತಿಯಲ್ಲಿ ನಾವು ಸಹ ತಲ್ಲೀನವಾಗುತ್ತೇವೆ , ಲೀನವಾಗುತ್ತೇವೆ. ಅರ್ಧ ಮನಸ್ಸಿನಿಂದ, ಬಲವಂತವಾಗಿ ಹೆಜ್ಜೆ ಹಿಂದೆ ಇಟ್ಟಾಗ ಕಣ್ಣಂಚುಗಳು ತೇವವಾಗಿತ್ತು. ಅದು ಮಳೆ ಹನಿಗಳೋ, ಆನಂದಭಾಷ್ಪವೊ ನಾ ಅರಿಯೆ!
Nimma manohara vivaraneinda aghanashiniya soundarya anavarana mathu jalapathada vihangama nota ...Dhanyavaadagalu Nithin
ReplyDeleteThank you :)
Delete